Sunday, November 27, 2016

ಹೊಸದುರ್ಗದ ಶುಭ ಪ್ರಯಾಣ!

"ಅನ್ವೇಷಿಸದ ಅನ್ವೇಷಣೆ ಪ್ರಯಾಣಿಕರ ಜೀವನದ ಅತ್ಯಂತ ಸಾಹಸಮಯ ಭಾಗವಾಗಿದೆ"

ನಮ್ಮ ಸ್ಥಳೀಯ ಸ್ಥಳ ಮಲೆನಾಡಿನಿಂದ ದೂರದಲ್ಲಿರುವ ನಮ್ಮ ಸಂಬಂಧಿಕರನ್ನು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಭೇಟಿಯಾಗಲು ನಾವು ಯೋಜಿಸಿದ್ದೆವು. ಇದು ಶಿವಮೊಗ್ಗ ಜಿಲ್ಲೆಯ ಪೂರ್ವಕ್ಕೆ ನನ್ನ ಮೊದಲ ಪ್ರವಾಸವಾಗಿತ್ತು.

ನಮ್ಮ ಕರ್ನಾಟಕದ ಆ ಭಾಗವನ್ನು ಎಂದಿಗೂ ಭೇಟಿ ಮಾಡಿರಲಿಲ್ಲ. ಸ್ಥಳವನ್ನು ನೋಡುವ ಮೊದಲು, ನಾನು ಯಾವಾಗಲೂ ಆ ಸ್ಥಳವನ್ನು ತೆರೆದ ಬಯಲು ಗ್ರಾಮಾಂತರ, ಹಸಿರು ಇಲ್ಲದ, ನೀರಿನ ಕೊರತೆ ಇರುವ ಮತ್ತು ಪ್ರಾದೇಶಿಕವಾಗಿ 'ಬಯಲುಸೀಮೆ' ಎಂದು ಭಾವಿಸಿದ್ದೆ. ಆದರೆ ಅದು ನನ್ನ ಕಲ್ಪನೆಗೆ ತದ್ವಿರುದ್ಧವಾಗಿತ್ತು! ಹಸಿರು ಬೆಟ್ಟಗಳಿಂದ ತುಂಬಿ ಮತ್ತು ನಿಖರವಾಗಿ ಹೇಳಬೇಕೆಂದರೆ, ತೆಂಗಿನ ಮರಗಳ ತೋಟ, ರಾಗಿ ಮತ್ತು ಇತರ ಕೃಷಿ ಹೊಲಗಳು, ರಸ್ತೆಗಳ ಪಕ್ಕದಲ್ಲಿ ದೊಡ್ಡ ಮರಗಳು… ನನ್ನ ಹಿಂದಿನ ಕಾಲ್ಪನಿಕ ಚಿತ್ರಕ್ಕಿಂತ ಸುಂದರವಾಗಿದೆ. ಇದು ನನಗೆ ಕನ್ನಡದ ಒಂದು ನಾಣ್ಣುಡಿಯನ್ನು ನೆನಪಿಸುತ್ತದೆ ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’. ನಾವು ಸರಿಯಾಗಿ ಊಹಿಸಿದ ಏಕೈಕ ದೃಶ್ಯವೆಂದರೆ ಅಲ್ಲಲ್ಲಿ ಕುರಿಗಳ ಹಿಂಡು ಮತ್ತು ಜನರು ಆ ಕುರಿ ಹಿಂಡುಗಳನ್ನು ಸಾಕುವುದು. ಆ ದೃಶ್ಯವನ್ನ ನೋಡುವುದೇ ಮಜವಾಗಿತ್ತು.
ನಂತರ ಹೊಸದುರ್ಗದ ಕಡೆಗೆ ಮತ್ತಷ್ಟು ಪ್ರಯಾಣಿಸುತ್ತಾ, ನಾವು ಮೊದಲು ಹಿರಿಯೂರು ತಾಲೂಕಿನ ಮಾರಿ ಕಣಿವೆ (ವಾಣಿ ವಿಲಾಸ ಸಾಗರ)ನ್ನು ನೋಡಲು ಹೊರಟೆವು, ಹೊಸದುರ್ಗದಿಂದ 3೦ಕಿಮೀ ದೂರದಲ್ಲಿದೆ. ಇದು ಕರ್ನಾಟಕದ ಅತ್ಯಂತ ಹಳೆಯ ಅಣೆಕಟ್ಟು, ಹತ್ತಿರದ ಸ್ಥಳವಾದ  ವೇದಾವತಿ ನದಿಯ ಮೇಲೆ ನಿರ್ಮಿಸಲಾಗಿದೆ. ಕೃಷಿ ಉದ್ದೇಶಕ್ಕಾಗಿ ಸರ್ ಎಂ. ವಿಶ್ವೇಶ್ವರಯ್ಯನವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರ ಒಡೆತನದಲ್ಲಿ ನಿರ್ಮಿಸಿದ ಮೊದಲ ನೈಸರ್ಗಿಕ ನೀರಿನ ಸಂಗ್ರಹವಿದು. ನಾವು ಬಾಲ್ಯದಲ್ಲಿ ಬಿಡಿಸುತ್ತಿದ್ದ 2 ಸಣ್ಣ ಹಸಿರು ಗುಡ್ಡಗಳು ಮತ್ತು ನಡುವೆ ಒಂದು ನದಿ, ಹಕ್ಕಿಗಳು ಹಾರುವ ಚಿತ್ರ ಇಲ್ಲಿ ಜೀವ ಪಡೆದುಕೊಂಡಂತ್ತಿತ್ತು. ಅದ್ಭುತ ಪ್ರಕೃತಿ! ಆ ಅಣೆಕಟ್ಟು ನೋಡುವುದೇ ಒಂದು ಸೋಜಿಗ. ಸುಂದರ ಪ್ರಶಾಂತವಾದ ಪರಿಸರ, ತಂಪಾದ ಗಾಳಿ, ನಿರ್ಮಲವಾದ ನದಿಯ ನೀರು 😍…

ಬೇಸಿಗೆ ಸಮೀಪಿಸುತ್ತಿರುವುದರಿಂದ ಅಣೆಕಟ್ಟಿನಲ್ಲಿ ಸ್ವಲ್ಪ ಕಡಿಮೆ ನೀರಿತ್ತು. ವಾಸ್ತುಶಿಲ್ಪ ಮತ್ತು ಆಗಿನ ತಾಂತ್ರಿಕ ಕೌಶಲ್ಯದ ಅಣೆಕಟ್ಟಿನ ಅದ್ಭುತ ನಿರ್ಮಾಣವನ್ನು ನೋಡಲು ಈ ಸ್ಥಳವು ಭೇಟಿ ನೀಡಲು ಯೋಗ್ಯವಾಗಿದೆ. ಆದರೆ, ಸುಡುವ ಶಾಖವು ನಮ್ಮನ್ನು ಶೀಘ್ರದಲ್ಲೇ ಆ ಸ್ಥಳದಿಂದ ಹೋಗುವಂತೆ ಮಾಡಿತು. ಹೊಸದುರ್ಗದ ಕಡೆ ಪ್ರಯಾಣ ಹೊರಟು ನಮ್ಮ ಸಂಬಂಧಿಕರನ್ನು ಭೇಟಿಯಾಗಲು ನೇರವಾಗಿ ಅವರ ಮನೆಗೆ ಹೋದೆವು. 

ಮಾರಿ ಕಣಿವೆ ಅಣೆಕಟ್ಟು

ತುಸು ವಿಶ್ರಮಿಸಿದ ನಂತರ ನಾವು ಹೊಸದುರ್ಗದಲ್ಲಿರುವ “ಪವಾಡ” ಸ್ಥಳವಾದ ಹಾಲು ರಾಮೇಶ್ವರ ಸ್ವಾಮಿ ದೇವಸ್ಥಾನದ ಕಡೆಗೆ ಹೋದೆವು. ಒಂದು ಸಣ್ಣ ದೇವಾಲಯಕ್ಕೆ ತ್ರೇತಾಯುಗದ ರಾಮಾಯಣದಿಂದ ಇತಿಹಾಸವಿದೆ. ಇಲ್ಲಿ ಜನರು ತಮ್ಮ ದೇವ-ದೇವತೆಗಳ ಬಗ್ಗೆ ಬಲವಾದ ನಂಬಿಕೆ ಮತ್ತು ಭಕ್ತಿಯನ್ನು ಹೊಂದಿದ್ದಾರೆ. ಈ ಸ್ಥಳವು ಪೌರಾಣಿಕ ರಹಸ್ಯಗಳಿಂದ ಕೂಡಿದೆ. ಪ್ರಮುಖವಾಗಿ ಶಿವಲಿಂಗವು ಅಲ್ಲಿ ಪೂಜಿಸಲ್ಪಡುತ್ತದೆ. ಶ್ರೀರಾಮನು ಈ ಶಿವಲಿಂಗವನ್ನು ಪೂಜಿಸಿದ ನಂಬಿಕೆಗಳಿವೆ. ಇಲ್ಲಿ ನಾವು ಸಾಕ್ಷಿ ಆಗಲೇ ಬೇಕಾದ ಸ್ಥಳವೆಂದರೆ ಉದ್ಭವ ಗಂಗೆ ಕೊಳ. ಈ ಕೊಳದ ನೀರಿನ ಮೇಲೆ ನಾವು ನಮ್ಮ ಆಶಯಗಳಿಗಾಗಿ ಭಗವಂತನಿಂದ ಪ್ರಸಾದದ ರೂಪದಲ್ಲಿ ಸೂಚನೆಗಳನ್ನು ಪಡೆಯುತ್ತೇವೆ. ಜನರೆಲ್ಲಾ ಕುಳಿತು ದೇವರನ್ನು ಪ್ರಾರ್ಥಿಸುವಾಗ ಹಾರೈಸುವ ಕೊಳದ (ಉದ್ಭವ ಗಂಗೆ) ನೀರಿನ ಮೇಲೆ ಭಾರವಾದ ವಸ್ತುಗಳು ತೇಲುತ್ತಿರುವುದು ಆಶ್ಚರ್ಯಕರವಾಗಿತ್ತು. ನಿಮ್ಮ ಮನೋಇಚ್ಛೆ ಈಡೇರುತ್ತದೆಯೋ ಇಲ್ಲವೋ ಎಂಬುದನ್ನು ಇದು ಸೂಚಿಸುತ್ತದೆ. ವರವಾದ ವಸ್ತುಗಳು ಬಾಳೆಹಣ್ಣು, ವೀಳ್ಯದ ಎಲೆ, ಅಡಿಕೆ, ಹಸಿರು ಗಾಜಿನ ಬಳೆಗಳು, ಒಣದ್ರಾಕ್ಷಿ ಅಥವಾ ಇತರ ಒಣಗಿದ ಹಣ್ಣುಗಳು, ತೆಂಗಿನಕಾಯಿ, ಇದ್ದಿಲು (ಕೆಟ್ಟ ಶಕುನ), ಬೆಳ್ಳಿ ವಸ್ತುಗಳು ಇತರೆ ಯಾವುದೇ ಇರಬಹುದು. ಎಲ್ಲವನ್ನೂ ಸುಂದರವಾಗಿ ವಿವರಿಸಿದ ನಮ್ಮ ಸೂಚಮ್ಮಂಗೆ (ಅಜ್ಜಿ) ಅನೇಕ ಧನ್ಯವಾದಗಳು. ಸರಳವಾಗಿ ನಂಬಿಕೆಗೂ ನಿಲುಕದ ಒಂದು ಅದ್ಭುತ ಜಗತ್ತು. ಕೊಳದಿಂದ ಇಂತಹ ಭಾರವಾದ ವಸ್ತುಗಳು ಹೊರಬರುವುದನ್ನು ನೋಡಿ ನಾನು ಆಶ್ಚರ್ಯಚಕಿತಳಾಗಿದ್ದೆ! ವಿಜ್ಞಾನದ ವಿದ್ಯಾರ್ಥಿಗೆ ಯಾವುದನ್ನೂ ಅಷ್ಟು ಸುಲಭವಾಗಿ ನಂಬುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಮಾನವನ ಊಹೆಗೂ ನಿಲುಕದ ಪ್ರಕೃತಿಯ ಪವಾಡಗಳಿಗೆ ಅಥವಾ ಅದ್ಭುತಗಳಿಗೆ ಎಲ್ಲಿಯೂ ಉತ್ತರಗಳಿಲ್ಲ, ಅಲ್ಲವೇ?! ಅಂತಹ ಅದ್ಭುತಗಳು ನಮ್ಮ ದೇಶದ ಭಾಗವಾಗಿರುವುದಕ್ಕೆ ಯಾವಾಗಲೂ ಹೆಮ್ಮೆ ಎನಿಸುತ್ತದೆ.

ಅದೇ ಸಂಜೆ ನಾವು ಹೊಸದುರ್ಗದ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿದೆವು. ನಾವು ನಮ್ಮ ಸಂಬಂಧಿಕರ ಜೊತೆ ಅವರ ನಗರದ ವಿಹಾರಕ್ಕೆ ಹೊರಟೆವು. ದಾರಿಯಲ್ಲಿ ಆ ಊರಿನ ಸುಂದರವಾದ ಐತಿಹಾಸಿಕ ಕೆಲ್ಲೊಡು ಶ್ರೀ ಆಂಜನೇಯ ದೇವಸ್ಥಾನ; ಹಳೆಯ ಪವಿತ್ರ ದೇವಾಲಯ ಮತ್ತು ಸಾಯಿಬಾಬಾ ಮಂದಿರದಂತಹ ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದೆವು. ಆ ಸ್ಥಳಗಳು ದೈವಿಕ ಮತ್ತು ಪ್ರಶಾಂತ ಸ್ಥಳಗಳಾಗಿದ್ದವು. ನಾವು ನಮ್ಮ ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದೆವು, ಆದರೆ ಪ್ರಯಾಣಿಕರಾಗಿ ಮರಳಿದೆವು. ನಾನು ಈ ಎಲ್ಲವನ್ನು ಒಂದು ದಿನ ಕಥೆಯಾಗಿ ಬರೆಯುತ್ತೇನೆಂದು ಎಂದೆಂದಿಗೂ ಯೋಚಿಸಿರಲಿಲ್ಲ. ಇದೇ ಪ್ರಯಾಣದ ಸೌಂದರ್ಯ. ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ನೀವು ಪ್ರಯಾಣಿಸಬೇಕು ಮತ್ತು ಪ್ರಯಾಣ ಮಾಡುವುದು ಮಾತ್ರವಲ್ಲ, ಪ್ರಯಾಣದ ಪ್ರತಿಯೊಂದು ಕ್ಷಣವೂ ಬದುಕಬೇಕು. 

ಅಮೃತೇಶ್ವರ ದೇವಸ್ಥಾನ

ಮಾರನೇ ದಿನ ಮುಂಜಾನೆ ಹಿಂದಿರುಗುವಾಗ, ನಾವು ತರಿಕೆರೆ ಮತ್ತು ಹೊಸದುರ್ಗ ಬಳಿಯ ಅಮೃತಪುರಕ್ಕೆ ಭೇಟಿ ನೀಡಿದ್ದೆವು, ಅದು ಮತ್ತೊಂದು ಉತ್ತಮ ಸ್ಥಳದ ಪ್ರವಾಸವಾಗಿತ್ತು. ನಿರ್ಲಕ್ಷಿಸದೆ ಆ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದಕ್ಕಾಗಿ ನಮ್ಮ ಸಂಬಂಧಿಕರಿಗೆ ಧನ್ಯವಾದಗಳು. ಇದು ಶಿವಮೊಗ್ಗಕ್ಕೆ ಹೋಗುವ ದಾರಿಯಲ್ಲಿದೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ದೇವಾಲಯವನ್ನು ಹೊಂದಿರುವ ಸುಂದರವಾದ ಅನ್ವೇಷಿಸದ ಹಸಿರು ಸ್ಥಳವಾಗಿತ್ತು. ಅಮೃತೇಶ್ವರ ದೇವಾಲಯದಲ್ಲಿ ಅನೇಕ ಭಾರೀ  ಗಾತ್ರದ ಸುಂದರವಾಗಿ ಕೆತ್ತಿದ ಏಕಕೂಟ ವಿನ್ಯಾಸಗಳ (ದೇವಸ್ಥಾನದ ಮಾರ್ಗದರ್ಶಿ ಮಾಹಿತಿ ಪ್ರಕಾರ) ಕಲ್ಲಿನ ವಿಗ್ರಹಗಳು, ಕಂಬಗಳು ಮತ್ತು ಕೊಳಗಳು ಹೆಚ್ಚಾಗಿ ಹೊಂದಿತ್ತು. ಅತ್ಯಂತ ವಿಶೇಷವೆಂದರೆ ಇಲ್ಲಿಯ ಒಂದು ಶಿಲ್ಪ ಭಾರತದಲ್ಲಿ ಎಲ್ಲೂ ಕಾಣಲು ಸಿಗದು, ವಸುದೇವ ಕತ್ತೆಯ ಕಾಲನ್ನು ಹಿಡಿದು ಕೃಷ್ಣನ ಜನ್ಮದ ಬಗ್ಗೆ ಕಂಸನಿಗೆ ಎಚ್ಚರಿಸದಂತೆ ಬೇಡಿಕೊಳ್ಳುವ ಪ್ರತಿಮೆ. ಬಹುಶಃ 'ಕಾರ್ಯವಾಸಿ ಕತ್ತೆಕಾಲು' ಅನ್ನೋ ಗಾದೆಮಾತು ಅಲ್ಲಿಂದ ಹುಟ್ಟಿರಬೇಕು. ಅಲ್ಲಿ ಚಾವಣಿಯನ್ನು ಬೆಂಬಲಿಸುವ ಹೊಳೆಯುವ ಲ್ಯಾಥ್ ತಿರುವು ಸ್ತಂಭಗಳ ಪ್ರಭಾವಶಾಲಿ ಸಾಲು ಇತ್ತು. ಕ್ರಿ.ಶ.1196 ರಲ್ಲಿ ಹೊಯ್ಸಳ ಸಾಮ್ರಾಜ್ಯದ ಅವಧಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ನಮ್ಮ ಮಾರ್ಗದರ್ಶಿ ಅದನ್ನು ಅದ್ಭುತವಾಗಿ ವಿವರಿಸಿದರು. ಆ ಅನ್ವೇಷಿಸದ ಸ್ಥಳದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದೆವು. ಸಂಪೂರ್ಣ ಪ್ರದೇಶವು ಹಸಿರಿನಿಂದ ಆವೃತವಾಗಿ, ತುಂಬಾ ಆಕರ್ಷಕವಾಗಿ ಕಾಣುತ್ತಿತ್ತು. ಈ ಪ್ರಯಾಣವು ಆಶ್ಚರ್ಯಕರವಾಗಿ, ನಿಜವಾಗಿಯೂ ಅದ್ಭುತ ಕ್ಷಣವನ್ನು ಹೊಂದಿತ್ತು. 

ಒಂದು ದಿನದಲ್ಲಿ ತುಂಬಾ ಸ್ಥಳಗಳಿಗೆ ಭೇಟಿಕೊಟ್ಟಿದ್ದೆವು. ಎಲ್ಲವೂ ಸಾಧ್ಯವಾದಷ್ಟು ಸರಾಗವಾಗಿ ಓಡಿತು. ಈ ಪ್ರವಾಸವು ನನ್ನಲ್ಲಿ ಆನಂದ, ಉತ್ಸಾಹದಂತಹ ಹಲವಾರು ಭಾವನೆಗಳನ್ನು ಮೂಡಿಸಿ ನನ್ನೊಂದಿಗೆ ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ನಾವು ತೆಗೆದ ಫೋಟೊಗಳನ್ನು ನೋಡುವ ಮೂಲಕ ಆ ಕ್ಷಣಗಳನ್ನು ಒಂದು ವಾರದ ನಂತರ ಪುನರುಜ್ಜೀವನಗೊಳಿಸುತ್ತಿದ್ದೇನೆ.
ಅಂತಹ ಸಂಪತ್ತನ್ನು ಹೊಂದಿರುವ ಭಾರತ ನಿಜವಾಗಿಯೂ ಶ್ರೀಮಂತ ದೇಶವಾಗಿದೆ, ಆದರೆ ಪರಿಶೋಧನೆಗಾಗಿ ಕಾಯುತ್ತಿದೆ. ನನಗೆ ಜೀವಮಾನದ ನೆನಪುಗಳು! ಹೊಸದುರ್ಗದ ಅನ್ವೇಷಿಸದ ಸ್ಥಳಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಕಾಮೆಂಟ್ ವಿಭಾಗದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಶುಭಾಶಯಗಳೊಂದಿಗೆ,

ಉತ್ಸಾಹಭರಿತ ಪ್ರಯಾಣ